ಮಂಗಳವಾರ, ಮಾರ್ಚ್ 17, 2026

ಮನಸಿನ ನೆಮ್ಮದಿಗಾಗಿ

 ಅರಿತರೂ ಅರಿಯದಂತೆ,
ಕಂಡರೂ ಕಾಣದಂತೆ,
ಕೇಳಿದರೂ ಕೇಳದಂತೆ,
ಅತ್ತರೂ ಹೇಳದಂತೆ ,
ನೊಂದರೂ ಕಾಣದಂತೆ,
ನಿನ್ನ ಪಾಡಿಗೆ ನೀನೀರು,
ನಿನ್ನ ಮನಸಿನ ನೆಮ್ಮದಿಗಾಗಿ.

ಕೆದಕಿದಷ್ಟೂ ರಾಡಿಯಾಗುವ,
ತಿಳಿದಷ್ಟು ಮನಸು ನೋಯುವ,
ಕೇಳಿದಷ್ಟು ಮೌನ ವಹಿಸುವ, 
ಭಾವಬಂಧನದಿಂದ ಹೊರಗೆ ಬಂದು,
ಹೊಸತು ಹುಡುಕುವ ತವಕ ನಮ್ಮಲಿರಲಿ,
ನಿಟ್ಟುಸಿರು ಬಿಟ್ಟು ಮನಸು ಹಗುರಾಗಿಸುವ,
ವಿದ್ಯೆ ಮರೆಯದಿರಲಿ.

ಎಲ್ಲ ಹಳೆ ನೋವುಗಳ, ಕೋಪ ತಾಪಗಳ,
ಬಿಟ್ಟು ಸಾಗೋಣ ಮುಂದೆ,
ಒಳಗಡೆಯೆ ಮುಚ್ಚಿಟ್ಟು, ಅದು ವೃಣವಾಗುವ ಮುನ್ನ, ತಡೆಯದೆ ಹಚ್ಚೋಣ ನಗುವಿನ ಮುಲಾಮು, 
ಹರಿದು ನದಿಯಾಗಲಿ ಕಣ್ಣೀರ ಧಾರೆ,
ಹೊಸ ಹುಲ್ಲು ಚಿಗುರಲಿ, 
ಬರಡು ಮರುಭೂಮಿಯಲಿ ,

ಕೆಡುಕು ಮಾಡುವ ಕೈಗಳಿರಲಿ,
ಅಣಕವಾಡುವ ಬಾಯಿಯಿರಲಿ,
ಕೆಂಡ ಕಾರುವ ಕಣ್ಣೆ ಇರಲಿ,
ಅಳುಕಬೇಡ, ಅಂಜಬೇಡ,
ನಂಬಿದವನು ಕಾವ ನೋಡ,
ಮನದಲಿನಿತು ನೋಯಬೇಡ,  
ಅವನ ಲೀಲೆ ಮರೆಯಬೇಡ.
ಒಳಿತ ದಾರಿ ತೊರೆಯಬೇಡ,
ನಿನ್ನ ಮನಸು ನೀನು ನೋಡ,
ನಿನ್ನ ಮನಸು ನೀನು ನೋಡ.



ಭಾನುವಾರ, ಜನವರಿ 25, 2026

ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ,
ಹೊಸ ಕನಸು ಕಟ್ಟಲು,
ಹೊಸ ಗೂಡು ಹುಡುಕಲು,
ಹಸಿದ ಹೊಟ್ಟೆ ಹೊರೆಯಲು,

ಜಗವು ಹೊಸತಾಗಿದೆ,
ಬಲು ಸುಂದರವಾಗಿದೆ,
ಹಳೆಯ ಗೂಡು ಹಳತಾಗಿದೆ,
ತಾಯಿ ಬೇರು ಸಡಿಲಾಗಿದೆ,

ಕೈಯ ತುತ್ತು ಮರೆತಾಗಿದೆ,
ಹಣದ ಬೆನ್ನು ಹತ್ತಿದೆ,
ಕರುಳ ಕರೆ ಕೇಳಿಸದೆ,
ಬಹಳ ಕಾಲವಾಗಿದೆ.

ಹೊಸ ಗೂಡು ದೊರಕಿದೆ,
ರಥವು ಕೈ ಸೇರಿದೆ,
ಹೃದಯ ರಾಗ ಹಾಡಿದೆ,
ಲಾಲಿ ಹಾಡು ಕೇಳಿದೆ..

ಊರ ದಾರಿ ಮರೆತಿದೆ, 
ಇಲ್ಲೇ ಸುಖವಾಗಿದೆ,
ಸ್ವರ್ಗ ಬಳಿಯೆ ಬಂದಿದೆ,
ಅದು ತಾನಾಗಿಯೇ ಕಾದಿದೆ.

ಸುಖದ ನೆರಳ ಬಾನಲಿ,
ಕಾರ್ಮೋಡ ಕವಿದಿದೆ,
ಕರೋನಾ ಮಾರಿ ಕಾಡಿದೆ,
ಊರ ನೆನಪಾಗಿದೆ.

ಕೆಲಸ ಹೊರಟು ಹೋಗಿದೆ,
ಕೈ ಖಾಲಿಯಾಗಿದೆ,
ಆರೋಗ್ಯ ಮೂಲೆ ಸೇರಿದೆ,
ಬದುಕು ಬಂಧನವಾಗಿದೆ.

ಮುತ್ತು ಜಾರಿ ಹೋಗಿದೆ,
ಕೈ ತುತ್ತು ನೆನಪಾಗಿದೆ,
ಬೇರೆ ದಾರಿ ಕಾಣದೆ,
ಹಕ್ಕಿ ಊರ ದಾರಿ ಹಿಡಿದಿದೆ.

ತಾಯಿ ನೆಲದ ಘಮಲು,
ಮೂಗಿಗೆ ತಾಗಲು,
ಹೊಸ ಹುರುಪು ಬಂದಿದೆ,
ಎಲ್ಲ ನೋವು ಮರೆಸಿದೆ.

ಹೆತ್ತ ಒಡಲು ತಣಿಸಿದೆ,
ಕಣ್ಣೀರ ಕಡಲು ಹರಿದಿದೆ,
ಹೇಳಲು ಪದವಿಲ್ಲದೆ,
ಜೀವ ಒದ್ದಾಡಿದೆ.

ಕೈ ತುತ್ತು ದೊರಕಿದೆ,
ಒಲವ ನೋಟ ಜೊತೆಗಿದೆ.
ಜೀವ ಹಗುರಾಗಿದೆ,
ನಿದ್ದೆ ಜೋಂಪು ಹತ್ತಿದೆ.

ಹಕ್ಕಿ ಬೆಳಗ ಸಾರಿದೆ,
ಹಸಿರು ಗದ್ದೆ ಕರೆದಿದೆ,
ಹಾರೆ ಕತ್ತಿ ಕೈ ಸೇರಿದೆ,
ದುಡಿದು ತಿನುವ ಮನಸ್ಸಾಗಿದೆ.

ಹೊಟ್ಟೆ ತುಂಬಾ ಅನ್ನವು,
ಮನಸು ತುಂಬಾ ಪ್ರೀತಿಯು,
ಅದರ ಒಳಗೆ ಶಾಂತಿಯು,
ಕಣ್ಣು ತುಂಬಾ ನಿದ್ದೆಯು,

ಪರಿಶುದ್ಧ ಗಾಳಿಯು,
ಉತ್ತಮ ಆರೋಗ್ಯವೂ,
ಇದರ ಮುಂದೆ ಶೂನ್ಯವು,
ದೊಡ್ಡ ಹುದ್ದೆ, ಕೈ ತುಂಬ ಹಣ.

ಹಳೆಯ ಗೂಡು ಸೊಗಸಾಗಿದೆ,  
ನೋಟ ಮಾತ್ರ ಬದಲಾಗಿದೆ,
ಹಕ್ಕಿ ಗೂಡಿಗೆ ಮರಳಿದೆ,
ತಾಯಿನಾಡನು ಮರೆಯದೆ||2||





ಭಾನುವಾರ, ಸೆಪ್ಟೆಂಬರ್ 28, 2025

ಅಮ್ಮನಲ್ಲದೇ ಬೇರಾರು?

 

ಹೆತ್ತ ತಾಯಿ ದೇವಕಿಗಿಂತ,
ಮಿಗಿಲಾಗಿಯೇ ಸಲಹಿದಳು,
ಆ ತಾಯಿ ಯಶೋದೆ,
ಅಮ್ಮನೆಂಬ ಹೆಸರಿಗೆ ಅವಳು,
ಅನ್ವರ್ಥವೆ ಆದವಳು.

ಕುಂತಿ ಹೆತ್ತ ಮಗುವನ್ನು,
ಜಗಕೆ ಹೆದರಿ ತ್ಯಜಿಸಿದಳು.
ಮಗುವು ಇಲ್ಲದ ಕೊರಗನ್ನು
ಕರ್ಣನ ಸಲಹಿ, ಮರೆತವಳು,
ರಾದೆಯಲ್ಲದೆ ಬೇರಾರು?

ರಾಮನ ಮೇಲಿನ ಕೈಕೆಯ ಪ್ರೇಮ,
ಆಯಿತು ಕರುಗುವ ಹಿಮ,
ಭರತನ ಮೇಲಿನ ಕುರುಡು ಪ್ರೇಮ,
ತಾಯಿ ಮರೆತಳು ನೀತಿ ನಿಯಮ.

ಪತಿವ್ರತೆಯಾಗುವ ಕನಸಿನಲಿ,
ಕುರುಡಿಯಾದಳು ಗಾಂಧಾರಿ ,
ಮಕ್ಕಳ ತಪ್ಪನು ತಿದ್ದಿ,
ಹೇಳಲಿಲ್ಲ ಅವರಿಗೆ ಬುದ್ಧಿ,

ಬಾಲ ನರೇಂದ್ರನ ತಾಯಿ,
ಮಾತೆ ಭುವನೇಶ್ವರಿ,
ಆದಿ ಮೀರಿ, ಅಂತ್ಯವಿಲ್ಲದ,
ಪರಮಾತ್ಮನ ಪರಿಚಯಿಸಿದಳು.

ಮೋಹನದಾಸ ಗಾಂಧಿeಜಿಯಾಗುವ ಮುನ್ನ,
ಸತ್ಯನಿಷ್ಟೆಯ, ಆಚಾರವಿಚಾರಗಳ,
ಸೂಕ್ಷ್ಮ ತಿಳಿಸಿದ, ಬುದ್ಧಿ ಹೇಳಿದ,
ಮಾತೆ ಪುತಲಿ ಬಾಯಿ. 

ರೂಪಗಳು ಹಲವಾರು,
ದಾರಿಗಳು ನೂರಾರು,
ಅಂತರಾಳ ಒಂದೇ,
ಮಗುವೇ ಮಾಣಿಕ್ಯ..

ಬಾಳ ದಾರಿಗೆ ಬೆಳಕಾದವಳು,
ಬಿಸಿಲ ಬೇಗೆಗೆ ನೆರಳಾದವಳು,
ಒಲುಮೆ ಧಾರೆಯ ಸೊದೆಯಾದವಳು,
ಯಮ ನಿಯಮಗಳ ಗುರುವಾದವಳು,

ತಪ್ಪುತಿದ್ದುವ ತಂದೆಯಾದವಳು,
ಬೇಡಿದ್ದು ನೀಡುವ ಕಾಮಧೇನು ಅವಳು,
ನೊಂದ ಕಣ್ಣೀರು ಎಂದು ಕಾಣಿಸದಂತೆ,
ಜಾದು ಮಾಡಿದವಳು.

ಅಂದಷ್ಟೂ ಕಿವಿತೆರೆಯುವವಳು,
ಬುದ್ಧಿ ಹೇಳಲು ಎಂದು ಮರೆಯದವಳು,
ತನ್ನ ತಾಳ್ಮೆಗೆ ಭೂಮಿಯಾಗುವಳು,
ಮೇರೆ ಮೀರಿದರೆ ಶಕ್ತಿಯಾದವಳು,

ಹೆಸರೇ ಇಲ್ಲದೆ, ಉಸಿರೇ ಆದವಳು,
ಮೇಣದಂತೆ ಕರಗಿದರು,
ನಗುನಗುತ ನಡೆವವಳು,
ಅಮ್ಮನಲ್ಲದೆ ಬೇರಾರು?


ಸೋಮವಾರ, ಆಗಸ್ಟ್ 18, 2025

ತಾತ

 ಕಳೆದು ಹೋದ ನಿನ್ನೆಗಳ,
ನೆನಪುಗಳ ತಡಕಿದರೆ,
ಭಾರವಾದ ನಿಟ್ಟುಸಿರೊಂದು
ಆಸರೆಯಾಗುತ್ತದೆ.
ಆಲದ ಮರದ ಆಳವಾದ 
ಬೇರುಗಳು ನೆನಪಿನಂಗಳದಲ್ಲಿ 
ಜೋಕಾಲಿಯಾಡುತ್ತದೆ.

ಹೊಣೆಗಾರಿಕೆಯ ಭಾರಕ್ಕೆ ಬಾಗಿದ ಬೆನ್ನಿನ
ಹಣ್ಣಾಗಿ ಮಾಗಿದ ಬೆಳ್ಳಿ ಕೂದಲಿನ 
ಊರಗಲ ಬೊಚ್ಚು ಬಾಯಗಲಿಸಿ
ಮಗುವಿನಂತೆ ನಗುವ ಆ ಕರ್ಣನ
ಆಲದಾ ಮರದಂತೆ ಜಗದಗಲ ಚಾಚಿ
ತನ್ನ ಚಾಚುವಿಕೆಯ ಕೆಳಗೆ ನೆರಳಾಗಿ 
ಬೆಳಕನ್ನು ಚೆಲ್ಲಿ, ಎಳೆತರುಗಳಿಗೆ
ಆಸರೆಯಾದ  ಹಿರಿಮರದಂತೆ,
ಬಾಯಾರಿದವರ ದಾಹ ಇಂಗಿಸುವ,
ಸದ್ದಿಲ್ಲದೆ ಹರಿವ ಗುಪ್ತಗಾಮಿನಿ,
ಈ ಮುದ್ದು ತಾತ.

ಎಲ್ಲ ಎಳೆಯರು ಕರೆದು 
ಸುತ್ತ ಸೇರಿಸಿಕೊಂಡು, ಕಡಲೆ ಬೇಕೇ, ಕಾಳು ಬೇಕೇ ಎನ್ನುತ್ತ , ರಾಮಾಯಣ,  ಭಾರತದ 
ಕತೆಗಳನು ತಿರು ತಿರುವಿ ಹೇಳುತ್ತ,
ಕಾಲು ಎಳೆಯುತ್ತ, ಬುದ್ಧಿ ಹೇಳುತ್ತ,
ಕಥೆಯ ಹೆಣೆಯುತ್ತ, ತಪ್ಪು ತಿದ್ದುತ್ತ 
ಕತ್ತಲದಾರಿಯಲ್ಲಿ ಜ್ಞಾನ ದೀಪವ
ಹಚ್ಚಿದವರು ಈ ಮುದ್ದು ತಾತ.

ಬಾಳೆಲ್ಲವೂ ತಾನು ದೀಪದ ಬತ್ತಿಯಂತೆ
ಉರಿದು, ಸುತ್ತೆಲ್ಲ ಬೆಳಕು ಬೀರಿ,
ಒಮ್ಮೆ ದ್ರೋಣನಂತೆ ಗುರುವಾಗಿ,‌
ಇನ್ನೊಮ್ಮೆ ಏನೂ ಅರಿಯದ ಮಗುವಾಗಿ, 
ವಾಮನರೂಪದ ತ್ರಿ ವಿಕ್ರಮನಾಗಿ,
ದಶಾವತಾರ ತೋರಿದ ತಾತ,
ಅನಾಯಾಸೇನ ಮರಣಂ,
ವಿನಾ ದೈನ್ಯೇನ ಜೀವನಂ ಮಾತಿನಂತೆ,
ಮಾತಿಲ್ಲದೆ ಮೌನಕ್ಕೆ ಜಾರಿ ಹೋದರು,
ಕನಸಲ್ಲೂ ಕಾಡುವ ಮುದ್ದು ತಾತ..






ಶನಿವಾರ, ಆಗಸ್ಟ್ 9, 2025

ತುಸು ನಗಲು

ಕಲಿತ ವಿದ್ಯೆಯ ಮರೆತು,
ಕೋಟಿ ವಿದ್ಯೆಯ ಕಲಿತು,
ಬದುಕಿನ ಸಾಗರದಿ ಈಜು ಕಲಿಯುತ್ತಾ,
ಬಂದ ಅಲೆಯ ಜೊತೆ ಒಂದಾಗಿ,
ತೇಲುತ್ತ ಮುಳುಗುತ್ತ , ಕನಸಿನ ಹರಿಗೋಲು ಹಿಡಿದು, ಸೋಲದಾ ಛಲದಲಿ,
ಮುಂದೆ ಸಾಗುವಳು, ದಣಿವು ಮರೆತು.

ಕರುಳ ಬಳ್ಳಿಗಳ ನೆರಳು ತಾನಾಗಿ,
ತುಸು ಬಾಡದಂತೆ, ನೀರು ಗೊಬ್ಬರವುಣಿಸಿ,
ಎಲ್ಲೆಲ್ಲೋ ಹರಡದಂತೆ, ಊರುಗೋಲನು ಕೊಟ್ಟು, ಮನತುಂಬ ಆಸೆ, ನಂಬಿಕೆಯಿಟ್ಟು 
ಭರವಸೆಯ ನಾಳೆಗಾಗಿ, ಹಗಲುಗನಸುಗಳ ಕಾಣುತ್ತಾ, ಅದ ನಿಜವಾಗಿಸುವ ಭರದಲ್ಲಿ ,
ಮರೆತಿಹಳು ಹಗಲು ರಾತ್ರಿಗಳ..

ಅತ್ತರೂ ಅಳದಂತೆ ,
ನಗದಿದ್ದರೂ ನಗುತ್ತಿರುವಂತೆ,
ಖುದ್ದು ನಟಿಸುವ ಅವಳು,
ಮಹಾನಟಿಯಲ್ಲ, ಹಣಕಾಗಿ ನಟಿಸುವುದೂ ಅಲ್ಲ, ತನ್ನವರಿಗಾಗಿ, ನೋವ ನುಂಗಿದವಳು,
ಹೊತ್ತು ಹೆತ್ತವರ ಋಣವ ಮರೆಯದ,
ಪಣವ ತೊಟ್ವವಳು.

ಎಲ್ಲ ಜಂಜಡದಲ್ಲಿ, ಮರೆತಿಹಳೆ ತನ್ನ ತಾನು,
ಇಲ್ಲ ಹಾಗೇನಿಲ್ಲ, ಸಮಯ ಹುಡುಕುವಳು,
ತನಗಾಗಿ ತಾನು, ಬಳಲಿ ಬೆಂಡಾದಾಗ, ಒಂದು ನಿಟ್ಟು ಸಿರು ಬಿಡಲು, ಬಿಡುವಾದ ಕಿವಿಗೆ ಆಕಾಶವಾಣಿಯ ಕಲರವ ಕೇಳಿಸಲು, ಮನದ ಭಾರವ ಲೇಖನಿಗೆ ಹೇಳಲು, ಕೆಲಸದ ಜೊತೆ ಮನೋರಂಜಿಸಲು, ಕಲಿತಿದ್ದಾಳೆ ತನ್ನನ್ನು ತಾನೇ ಸಂತೈಸಲು, ನೋವು ಮರೆತು  ನಗಲು,
ತುಸು ನಗಲು....

ಮನಸಿನ ನೆಮ್ಮದಿಗಾಗಿ

 ಅರಿತರೂ ಅರಿಯದಂತೆ, ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ, ಅತ್ತರೂ ಹೇಳದಂತೆ , ನೊಂದರೂ ಕಾಣದಂತೆ, ನಿನ್ನ ಪಾಡಿಗೆ ನೀನೀರು, ನಿನ್ನ ಮನಸಿನ ನೆಮ್ಮದಿಗಾಗಿ. ಕೆದಕಿದಷ್ಟೂ ...